ಬೈಂದೂರು: ಗೋವು ನಮ್ಮ ತಾಯಿಯಾಗಿದ್ದು ಗೋವಿನ ರಕ್ಷಣೆ ಹಾಗೂ ಆರೈಕೆ ಮಾಡುವುದರಿಂದ ಊರಿನ ಅಭಿವೃದ್ಧಿಯಾಗುತ್ತದೆ. ನಮ್ಮ ದೇಶದಲ್ಲಿ ಗೋವಿಗೆ ವಿಶೇಷ ಸ್ಥಾನ ಇದ್ದು, ರಾಷ್ಟ್ರ ಮಾತೆಯ ಸ್ಥಾನಮಾನ ನೀಡಬೇಕಿದೆ ಎಂದು ಶಂಕರಪುರ ದ್ವಾರಕಾಮಾಯಿ ಮಠ ಏಕಜಾತಿ ಧರ್ಮಪೀಠದ ಪೀಠಾಧೀಶ್ವರ ಸಾಯಿ ಈಶ್ವರ ಗುರೂಜಿ ಹೇಳಿದರು.
ಯಡ್ತರೆಯಲ್ಲಿರುವ ಅಪಘಾತ ಹೊಂದಿದ ಗೋವಿನ ಆರೈಕೆ ಕೇಂದ್ರ ‘ಪುಣ್ಯಕೋಟಿ ವೆಲ್‌ಫೇರ್ ಟ್ರಸ್ಟ್’ನ ನವೀಕೃತ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಗೋವಿನ ನೋವು ತನ್ನ ನೋವೆಂಬಂತೆ ಸ್ವೀಕರಿಸಿ ಅವುಗಳ ಸೇವೆ ಹಾಗೂ ಆರೈಕೆ ಮಾಡುತ್ತಿರುವ ಸಂಜೀವ ದೇವಾಡಿಗರ ಕಾರ್ಯ ಶ್ಲಾಘನೀಯ. ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಆರ್ಥಿಕ ಬೆಂಬಲ ನೀಡಬೇಕಿದೆ ಎಂದರು.

ಪುಣ್ಯಕೋಟಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದ ಚಂದ್ರಶೇಖರ, ವಿಶ್ವೇಶ್ ಹೆರೆಂಜಾಲು, ಕೃಷ್ಣ ಪೂಜಾರಿ ಬಿಜೂರು ಅವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಪಶು ವೈದ್ಯಾಧಿಕಾರಿ ನಾಗರಾಜ ಮರವಂತೆ, ಬೈಂದೂರು ತಾಲ್ಲೂಕು ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ಮದ್ದೋಡಿ, ಗಜೇಂದ್ರ, ನಾಗರಾಜ ಪೂಜಾರಿ, ಶ್ರೀಧರ ಬೇಲೆಮನೆ, ವೆಂಕಟೇಶ್ ಕಿಣಿ, ಮೋಹನ್ ಶೆಟ್ಟಿ ಬ್ರಹ್ಮಾವರ, ಶ್ರೀಧರ ಬಿಜೂರು, ಪ್ರಿಯದರ್ಶಿನಿ, ಅನಿತಾ ಕೆ. ಭಾಗವಹಿಸಿದ್ದರು.
ಗೌರವ ಸಲಹೆಗಾರ ಯು. ರಾಜಾರಾಮ ಭಟ್ಟ ಸ್ವಾಗತಿಸಿದರು. ಪುಣ್ಯಕೋಟಿ ವೆಲ್‌ಫೇರ್ ಟ್ರಸ್ಟ್ ಸಂಸ್ಥಾಪಕ ಎಸ್. ಸಂಜೀವ ದೇವಾಡಿಗ ವಂದಿಸಿದರು. ನಿವೃತ್ತ ಶಿಕ್ಷಕ ಗಿರೀಶ ಶ್ಯಾನುಭಾಗ್ ನಿರೂಪಿಸಿದರು.


