ಬೈಂದೂರು : ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದಲ್ಲಿ ಸೋಮವಾರ ನಾಗರ ಪಂಚಮಿ ನಾಗ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ 11ನೇ ವರ್ಷದ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಮರವಂತೆ ವರಾಹ ದೇವಸ್ಥಾನದ ಮಾಜಿ ಧರ್ಮದರ್ಶಿ ಸತೀಶ್ ಎಂ ನಾಯಕ್ ಧಾರ್ಮಿಕ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿ, ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ದೇವರ ಮೇಲೆ ನಂಬಿಕೆ ಇಟ್ಟು, ಸತ್ಕಾರ್ಯಗಳನ್ನು ಮಾಡುತ್ತಾ, ಧೈರ್ಯದಿಂದ ಮುಂದೆ ಸಾಗಬೇಕು. ನಾಗ ದೇವರ ಆರಾಧನೆಯು ನಮ್ಮಲ್ಲಿ ಪ್ರಕೃತಿ ಮತ್ತು ಜೀವಜಾಲದ ಬಗ್ಗೆ ಗೌರವವನ್ನು ಬೆಳೆಸುತ್ತದೆ ಎಂದರು.

ಶೃಂಗೇರಿ ಶಾರದಾ ಪೀಠ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ನೇರವೇರಿಸಿ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಾಗ ದೇವರಿಗೆ ವಿಶೇಷವಾದ ಸ್ಥಾನವಿದೆ. ನಾಗ ದೇವರನ್ನು ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಆರಾಧಿಸಿದರೆ ಮನಸ್ಸಿಗೆ ಧೈರ್ಯ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ನಮ್ಮ ಹಿರಿಯರಿಂದ ಬಂದಿದೆ. ದೇವರ ಸೇವೆ ನಿರಂತರವಾಗಿ ಯಾರು ಮಾಡುತ್ತಾರೋ ಅವರಿಗೆ ದೇವರ ಎಂದಿಗೂ ಕೈಬಿಡುವುದಿಲ್ಲ. ಹಣ ಎಷ್ಟು ಇದ್ದರೇನು ಕೊಡುವ ಸಂಖ್ಯೆ ಮುಖ್ಯವಲ್ಲ, ಕೊಡುವ ಮನಸ್ಸು ಮುಖ್ಯ ಎಂದರು.
  
ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಇವರಿಗೆ  ನಾಗಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾನು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೇನೆ ಆದರೆ ದೇವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿದ್ದು ಇದೇ ಮೊದಲ ಬಾರಿ. ದೇವರಲ್ಲಿ ನಂಬಿಕೆ ಇಟ್ಟರೆ ಅಸಾಧ್ಯವೂ ಸಾಧ್ಯವಾಗುತ್ತದೆ. ನಮ್ಮ ಪ್ರಯತ್ನಕ್ಕೆ ದೇವರ ಆಶೀರ್ವಾದ ಸೇರಿದರೆ ಯಶಸ್ಸು ಖಚಿತ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಭಯಪಡದೆ, ನಾಗ ದೇವರ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಮುಂದೆ ಸಾಗಬೇಕು. ಭಕ್ತಿ ಎಂದರೆ ಕೇವಲ ಪೂಜೆ ಮಾಡುವುದಲ್ಲ. ಸತ್ಯ, ಧರ್ಮ, ದಯೆ ಮತ್ತು ಒಳ್ಳೆಯತನದ ದಾರಿಯಲ್ಲಿ ನಡೆಯುವುದೂ ಭಕ್ತಿ ಎಂದರು.

ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದ ಅಧ್ಯಕ್ಷ ತಿಮ್ಮ ವಿ ದೇವಾಡಿಗ ನಾಗಾನುಗ್ರಹ ಪ್ರಶಸ್ತಿ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ವಾಸ್ತು ತಜ್ಞ, ಯಕ್ಷಗಾನ ಪ್ರಸಂಗಕರ್ತರು ಹಾಗೂ ಜ್ಯೋತಿಷಿ ಡಾ ಬಸವರಾಜ್ ಶೆಟ್ಟಿಗಾರ್ ಧಾರ್ಮಿಕ ಪ್ರವಚನ ನೀಡಿದರು.

ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಜಯರಾಮ ಶೆಟ್ಟಿ ವಂಡಬಳ್ಳಿ, ಕುಂದಾಪುರ ಉದ್ಯಮಿ ಅಶೋಕ್ ಶೆಟ್ಟಿ ಸಂಸಾಡಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ ಮರವಂತೆ, ನಾವುಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ, ಗೋವಾ ಉದ್ಯಮಿ ಸತೀಶ್ ಪೂಜಾರಿ ಮರವಂತೆ ಉಪಸ್ಥಿತರಿದ್ದರು.

ಗೌರವ ಸಲಹೆಗಾರ ಸಿ.ಎಸ್. ಖಾರ್ವಿ ಕೊಡೇರಿ ಸ್ವಾಗತಿಸಿದರು. ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದ ಧರ್ಮದರ್ಶಿ ತಿಮ್ಮ ವಿ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು. ಕೆರ್ಗಾಲ್ ಬನಗಲ್ ಹಾಡಿ ವನದುರ್ಗಾ ದೇವಿ ದೇವಸ್ಥಾನದ ಕಾರ್ಯದರ್ಶಿ ಗೋವಿಂದ ಎಮ್ ಮಟ್ನಕಟ್ಟೆ ಕಾರ್ಯಕ್ರಮ ನಿರ್ವಹಿಸಿ/ವಂದಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading