ಜಿಬಿಎಸ್ ಸಿನ್ಡ್ರೋಮ್ ಎಂಬ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ಸರಕಾರದ ಮಹತ್ವದ ನಿರ್ಧಾರ

ರಾಜ್ಯದಲ್ಲಿ ಗಿಲೆನ್-ಬಾರಿ ಸಿಂಡ್ರೋಮ್ (GBS) ಎಂಬ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗಲು ನಮ್ಮ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಕಾಯಿಲೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವೂ ಮತ್ತು ದುಬಾರಿಯೂ ಆದ ‘ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಈಗ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (AB PMJAY-CM’s ArK) ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ…

  • ದುಬಾರಿ ಚಿಕಿತ್ಸೆಗೆ ಸರ್ಕಾರಿ ಸವಲತ್ತು: ಈ ಹಿಂದೆ ಜಿ.ಬಿ.ಎಸ್ ಕಾಯಿಲೆಗೆ ನೀಡಲಾಗುತ್ತಿದ್ದ ಮೂಲ ಚಿಕಿತ್ಸೆಯ ಜೊತೆಗೆ, ಈಗ ಅತ್ಯಗತ್ಯವಾದ IVIG ಥೆರಪಿಯನ್ನೂ ಯೋಜನೆಯಡಿ ತರಲಾಗಿದೆ. ಇದಕ್ಕಾಗಿ ವಿಶೇಷ ಪ್ರೊಸೀಜರ್ ಕೋಡ್‌ಗಳನ್ನು (2B.M1.00061D ಮತ್ತು 2B.M1.00061E) ನಿಗದಿಪಡಿಸಲಾಗಿದೆ.
  • ಚಿಕಿತ್ಸಾ ವೆಚ್ಚ ಮತ್ತು ಮಿತಿ: ಪ್ರತಿ ರೋಗಿಗೆ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಈ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಔಷಧಿಯ ದರವನ್ನು ಪ್ರತಿ ಗ್ರಾಂಗೆ 2,000 ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ರೋಗಿಯ ತೂಕದ ಆಧಾರದ ಮೇಲೆ ಡೋಸೇಜ್ ನೀಡಲು ಸೂಚಿಸಲಾಗಿದೆ.
  • ಪಾರದರ್ಶಕತೆಗೆ ಆದ್ಯತೆ: ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡುವಾಗ ಔಷಧದ ಬಾಟಲಿ (Vial), ಅದರ ಬ್ಯಾಚ್ ಸಂಖ್ಯೆ, ರೋಗಿಯ ಹೆಸರಿರುವ ಫೋಟೋ ಹಾಗೂ ವೈದ್ಯರು ದೃಢೀಕರಿಸಿದ ಡೋಸೇಜ್ ಪಟ್ಟಿಯನ್ನು ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ.
  • ಎಲ್ಲಾ ಆಸ್ಪತ್ರೆಗಳಿಗೆ ಅನ್ವಯ: ಈ ಸೌಲಭ್ಯವು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಯೋಜನೆಯಡಿ ನೋಂದಾಯಿತವಾಗಿರುವ (Empanelled) ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ.
    ಬಡ ಮತ್ತು ಸಾಮಾನ್ಯ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ನರರೋಗಕ್ಕೆ ಸಂಬಂಧಿಸಿದ ಈ ಕಠಿಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವುದರಿಂದ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ.

ಬಡ ಮತ್ತು ಸಾಮಾನ್ಯ ವರ್ಗದ ರೋಗಿಗಳಿಗೆ ಸಾವಿರಾರು ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading