ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್

ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಭೇಟಿ ನೀಡಿ ತಾಯಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು.

ಚೆನ್ನೈನಿಂದ ಇಂದು ಬೆಳಗ್ಗೆ ಹೊರಟು ಮಧ್ಯಾಹ್ನ ೧೨.೩೦ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ಮಂಗಳೂರಿನಿಂದ ರಸ್ತೆ ಮೂಲಕ ಶಕ್ತಿಪೀಠ ಕೊಲ್ಲೂರಿಗೆ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇಶದಲ್ಲೇ ಶಕ್ತಿ ಪೀಠವಾಗಿ ಹೆಸರಾಗಿರುವ ಕೊಲ್ಲೂರು ಕ್ಷೇತ್ರಕ್ಕೆ ಮೊದಲಿನಿಂದಲೂ ತಮಿಳುನಾಡಿನ ಹಲವು ಮುಖ್ಯಮಂತ್ರಿಗಳು ಭೇಟಿ ನೀಡಿದ್ದು, ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಎಂ.ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್, ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರ ಪತ್ನಿ ಜಾನಕಿ ರಾಮಚಂದ್ರನ್ ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು ಕೊಲ್ಲೂರು ಕ್ಷೇತ್ರದ ಭಕ್ತರಾಗಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಸಹ ಮೂಕಾಂಬಿಕೆ ದೇವಿಯ ಪರಮ ಭಕ್ತರಾಗಿದ್ದು ಹಲವು ಬಾರಿ ಅವರು ಕೊಲ್ಲೂರಿಗೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ನೆರವೇರಿಸಿದ್ದರು.

ಮುಖ್ಯಮಂತ್ರಿಯಾದ ನಂತರ ಜೋಸೆಫ್ ವಿಜಯ್ ಅವರು ಯಾವುದೇ ದೇವಸ್ಥಾನಗಳಿಗೆ ಭೇಟಿ ನೀಡಿರಲಿಲ್ಲ. ಮುಖ್ಯಮಂತ್ರಿ ಆಗುವ ಮೊದಲು ಅವರು ತಮಿಳುನಾಡಿನ ತಿರುಚಂದೂರ್ ಸೇರಿದಂತೆ ಹಲವು ಪ್ರಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಅವರು ಕೊಲ್ಲೂರಿಗೆ ಆಗಮಿಸಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಕೊಲ್ಲೂರಿಗೆ ವಿಶೇಷ ಪೂಜೆಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ಹಾಗೂ ಅವರು ಸಂಚರಿಸುವ ರಸ್ತೆ ಮಾರ್ಗದಲ್ಲಿ ವಿಶೇಷ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading