ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಹಸ್ರಾರು ಭಕ್ತಾದಿಗಳು ಶಿವ ಲಿಂಗ ಸ್ಪರ್ಶ ಪೂಜೆ ಸಲ್ಲಿಸಿ ಪುಳಕಿತರಾದರು.
ಗಂಗನಾಡು ದೇವಸ್ಥಾನವು ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಪೂರ್ವಕ್ಕೆ ಸುಮಾರು 8 ಕಿ.ಮೀ ದೂರದಲ್ಲಿದೆ. ಇದು 10 ನೇ ಶತಮಾನದಷ್ಟು ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ.ಈ ಪ್ರಾಚೀನ ದೇವಸ್ಥಾನ ಇರುವ ಸ್ಥಳವಾದ ವನಕೊಡ್ಲು, ಪಶ್ಚಿಮ ಘಟ್ಟಗಳ ಸುಂದರವಾದ ಹಚ್ಚ ಹಸಿರಿನ ಬೆಟ್ಟಗಳಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹಾಗೂ ರೋಗರುಜಿನಗಳನ್ನು ದೂರ ಮಾಡುವಂತ ಪುಷ್ಕರಣೆ ಕೂಡ ಇಲ್ಲಿ ಕಾಣಿಸುತ್ತದೆ. ಭಕ್ತಾದಿಗಳು ಕೆರೆಯಲ್ಲಿ ಸ್ನಾನ ಮಾಡಿ ಮಡಿಯಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜೆ ಮಾಡುವಂತಹ ಪದ್ಧತಿ ಅನಾಧಿಕಾಲದಿಂದ ಇಲ್ಲಿ ರೂಡಿಯಲ್ಲಿದೆ.
ಈ ದೇವಸ್ಥಾನದ ಆಡಳಿತವನ್ನು ಯಡ್ತಾರೆ ಮನೆಯವರು ನಿರ್ವಹಿಸಿಕೊಂಡು ಬಂದಿದ್ದಾರೆ. ಕ್ಷೇತ್ರದಲ್ಲಿ ಪ್ರಧಾನ ಮಾಹಾಲಿಂಗೇಶ್ವರ ದೇವರು ಹಾಗೂ ಸುತ್ತಪೌಳಿಯ ಭಾಗದಲ್ಲಿ ಪಾರ್ವತಿ ದೇವರು ಮತ್ತು ಗಣಪತಿ ದೇವರ ಗುಡಿ ಇದೆ. ಹೊರ ಭಾಗದಲ್ಲಿ ಮಹಿಷಮರ್ದಿನಿ ಹಾಗೂ ನಾಗ ದೇವರ ಗುಡಿ ಇದೆ.
ಅತಿ ವರ್ಷವೂ ಭಕ್ತಾದಿಗಳು ಭಕ್ತಿ ಶುದ್ಧತೆಯಿಂದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶಿವಲಿಂಗದ ಮುಟ್ಟಿ ಪೂಜೆಯನ್ನು ಮಾಡಿ ಕೃತಾರ್ಥರಾಗುತ್ತಾರೆ.

