ಬೈಂದೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಲಿದ್ದ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹರಕೇರಿ ಬಳಿ ಇರುವ ಮನೆಯೊಂದಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೈಂದೂರು ಆಹಾರ ನಿರೀಕ್ಷಕ ವಿನಯ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಬಿಜೂರು ಗ್ರಾಮದ ಅರಕೇರಿ ನಿವಾಸಿ ಅಬ್ದುಲ್ ಬಿನ್ ಅಬ್ಬಾಸ್ ಎಂಬುವರ ಮನೆಯಲ್ಲಿ ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಕೊಚ್ಚಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು ಎನ್ನುವ ಮಾಹಿತಿಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ದಾಳಿ ನಡೆಸಿದ ಸಂದರ್ಭದಲ್ಲಿ ಒಟ್ಟು 16 ಪಾಲಿಥೀನ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು 7.14 ಕ್ವಿಂಟಲ್ ತೂಕದ ಕುಚ್ಚಲಕ್ಕಿ ಪತ್ತೆಯಾಗಿದೆ ಇದರ ಅಮೂಲ್ಯ ಸುಮಾರು 16422 ಎಂದು ಅಂದಾಜು ಹೇಳಲಾಗಿದೆ. ಆರೋಪಿ ಉಚಿತವಾಗಿ ವಿತರಿಸುವ ಅಕ್ಕಿ ಬೇರೆಯವರಿಂದ ಕಾನೂನುಬಾಹಿರವಾಗಿ ಖರೀದಿಸಿ ಹೆಚ್ಚಿನ ಬೆಲೆಗೆ ಹೊರಗಡೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಸಂಗ್ರಹಿಸಲಾಗಿದೆ ಎನ್ನುವ ಮಾಹಿತಿ ನೀಡಿದರು. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

