ಬೈಂದೂರು : ಜನವರಿ 21ರಂದು ಕಳವಾಡಿಯಲ್ಲಿ ನಡೆಯುವ ಕಂಬಳ ಕ್ಷೇತ್ರದ ದಿಗ್ಗಜ ದಿ. ವೆಂಕಟ ಪೂಜಾರಿ ಸಸಿಹಿತ್ಲು ಇವರ ಸವಿ ನೆನಪಿಗಾಗಿ ಶುಕ್ರವಾರ ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದಲ್ಲಿ ಸೂರ್ಯ-ಚಂದ್ರ ಜೋಡುಕೆರೆ ಕಂಬಳ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದ ಮೊಕ್ತೇಸರ ವಸಂತ್ ಕುಮಾರ್ ಶೆಟ್ಟಿ ಅವರು ಜೋಡುಕೆರೆ ಕಂಬಳ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ್ದರು.
ಬೈಂದೂರು ಸಾಂಪ್ರದಾಯಕ ಹಾಗೂ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಅವರು ಮಾತನಾಡಿ ದಿವಗಂತ ವೆಂಕಟ ಪೂಜಾರಿ ಅವರು ಕಂಬಳ ಕ್ಷೇತ್ರದ ಸಾಕಷ್ಟು ಹೆಸರು ಮಾಡಿದವರು, ಅವರ ಸವಿ ನೆನಪಿಗಾಗಿ ಪ್ರಪ್ರಥಮ ಬಾರಿಗೆ ಜೋಡುಕೆರೆ ಕಂಬಳ ಆಯೋಜಿಸಿದ್ದೇವೆ. ಜೋಡುಕೆರೆ ಕಂಬಳಕ್ಕಾಗಿ ಹೊಸತಾಗಿ ಕಂಬಳಗದ್ದೆ ಸಜ್ಜಾಗುತ್ತಿದೆ. ನಮ್ಮ ಗ್ರಾಮೀಣ ಭಾಗದ ಕೆಸರುಗದ್ದೆಯಲ್ಲಿ ಜೋಡುಕೆರೆ ಕಂಬಳವನ್ನು ನೋಡುವುದೇ ಚಂದ. ಕಂಬಳ ಓಟಗಾರರು ಹಾಗೂ ಪ್ರಾಣಿಗಳ ಸಂಬ0ಧವನ್ನು ತೋರಿಸುವ ಕಂಬಳ ಇದಾಗಲಿದೆ ಎಂದರು.
ರಾಜ್ಯ ಕಂಬಳ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ವಿಕ್ರಂ ಪೂಜಾರಿ ಸಸಿಹಿತ್ಲು ಅವರು ಮಾತನಾಡಿ, ನಮ್ಮ ತಂದೆಯ ಸವಿ ನೆನಪಿಗಾಗಿ ಈ ಬಾರಿ ವಿಶೇಷವಾಗಿ ಜೋಡುಕರೆಯಲ್ಲಿ ಕೋಣಗಳು ಓಡಲಿದ್ದು ಬೈಂದೂರು ಭಾಗದಲ್ಲಿ ಜೋಡುಕೆರೆ ಮಾದರಿ ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿದ್ದು ಸಾವಿರಾರು ಅಭಿಮಾನಿಗಳು ಸೇರುವ ಸಾಧ್ಯತೆ ಇದೆ ಹಾಗೇ ಜೋಡುಕೆರೆ ಕಂಬಳ ಸ್ಪರ್ಧೆಯಲ್ಲಿ ಹಗ್ಗ ಅತೀ ಕಿರಿಯ, ಕಿರಿಯ, ಹಿರಿಯ ಹಾಗೂ ಕನೆ ಹಲಗೆ ವಿಭಾಗದಲ್ಲಿ ಸ್ಪರ್ಧೆಯಿದ್ದು, ವಿಜೇತರಿಗೆ ನಗದು ಬಹುಮಾನ ಮತ್ತು ಶಾಶ್ವತ ಫಲಕ ಇದರೊಂದಿಗೆ ಸಮಾರೋಪ ಸಮಾರಂಭದಲ್ಲಿ 2025-26ನೇ ಸಾಲಿನ ಸಾಂಪ್ರದಾಯಿಕ ಕಂಬಳದ ವಿಜೇತರಿಗೆ ಜಿಲ್ಲಾ ಚಾಂಪಿಯನ್ ಪುರಸ್ಕಾರದ ಪ್ರಧಾನ ನೀಡಿ ಗೌರವಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವೆಂಕಟರಮಣ ಗಾಣಿಗ ನಾವುಂದ, ಉಪಾಧ್ಯಕ್ಷ ಪರಮೇಶ್ವರ ಭಟ್ ಬೋಳಂಬಳ್ಳಿ, ಹಿರಿಯರಾದ ನಾಗಣ್ಣ ಕಳವಾಡಿ, ಧ.ಗ್ರಾ. ಯೋಜನಾಧಿಕಾರಿ ಚಂದ್ರ ನಾಯ್ಕ್, ಬೈಂದೂರು ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಇಂದಿರಾ ಕೊಠಾರಿ, ಉಷಾ ಶೆಟ್ಟಿ, ಕಂಬಳ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ ಮೊಳೆಬೈಲು, ವೆಂಕಟೇಶ್ ಪೂಜಾರಿ ಬಡಾಮನೆ, ಸಮಿತಿ ಕಾರ್ಯದರ್ಶಿ ಸುಧೀರ್ ದೇವಾಡಿಗ ಕಂಚಿಕಾನ್, ರೈತ ಮುಖಂಡ ಗಣಪ ಗಂಗನಾಡು, ಮಂಜುನಾಥ್ ಗಾಣಿಗ ನಾವುಂದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ದೇವಾಡಿಗ, ಭರತ್ ಕೊಠಾರಿ, ವಿಶ್ವನಾಥ್ ದೇವಾಡಿಗ ನಾಯ್ಕನಕಟ್ಟೆ, ಅರವಿಂದ ಪೂಜಾರಿ ಗಜ್ನಾರ್ ಮನೆ ಕೊಡೇರಿ, ನಾಗೇಂದ್ರ ಪೂಜಾರಿ ಕೊಡೇರಿ, ಶಂಕರ ದೇವಾಡಿಗ ನಾಗೂರು, ಅಣ್ಣಪ್ಪಯ್ಯ ಆಚಾರ್ಯ ಕಳವಾಡಿ, ಉದಯ್ ಗೌಡ ಬೋಳಂಬಳ್ಳಿ ಇದ್ದರು.

