ವಿದ್ಯಾವಂತರೆ ಸೈಬರ್ ವಂಚನೆಗೆ ಹೆಚ್ಚು ಬಲಿಯಾಗುತ್ತಿದ್ದಾರೆ: ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್
ನಾಡಾ : ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸಂಬಂಧಿತ ಪ್ರಕರಣಗಳನ್ನು ಎದುರಿಸಲು ಹಾಗೂ ಸೈಬರ್ ಸುರಕ್ಷತಾ ಅಭಿಯಾನ ಉಡುಪಿ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಸಮಿತಿಗಳನ್ನು ಪ್ರಾರಂಭಿಸಿದ್ದು ಈ ಸಂಬಂಧ ಗಂಗೊಳ್ಳಿ ಠಾಣೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ರೆ.ಫಾ.ರೋಬರ್ಟ್.ಝಡ್.ಎಂ.ಡಿ ಸೋಜಾ ಕೈಗಾರಿಕಾ ತರಬೇತಿ ಸಂಸ್ಥೆ ನಾಡದಲ್ಲಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್ ಮಾತನಾಡಿ ಎಲ್ಲರಲ್ಲೂ ಸೈಬರ್ ಅಪರಾಧಗಳ ಬಗ್ಗೆ ಅರಿವು.ಜಾಗೃತ ಭಾವ ಅತ್ಯಗತ್ಯ ,ವಿದ್ಯಾರ್ಥಿಗಳು ಕ್ಷಣಿಕ ಸುಖದ ದುರಾಸೆಗಳಿಗೆ ಅಮೂಲ್ಯವಾದ ಜೀವನ ಬಲಿಕೊಡುತ್ತಿದ್ದು ಇಂತವರಲ್ಲಿ ವಿದ್ಯೆಯುಳ್ಳವರೆ ಹೆಚ್ಚು ಎನ್ನುವ ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮನೋಹರ್ ಆರ್. ಕಾಮತ್ ಅವರು, ನಮಗೆ ಅರಿವಿಲ್ಲದಂತೆ ಅಪರಾಧ ಲೋಕದೊಳಗೆ ಸೇರಿಕೊಳ್ಳುವ ಮೊದಲು ಜಾಗೃತರಾಗಿರಬೇಕು. ಮಾದಕ ವ್ಯಸನಗಳು ವೈಯಕ್ತಿಕ ಜೀವನವನ್ನು ಹಾಳುಮಾಡುವ ಜೊತೆ ಕುಟುಂಬದ ನೆಮ್ಮದಿಯನ್ನೂ ಕೆಡಿಸುತ್ತದೆ. ಆಕಸ್ಮಿಕ ಗೆಳೆತನ ಕೆಟ್ಟದ್ದನ್ನು ಪ್ರಚೋದಿಸುತ್ತದೆ ಎಂದಾದರೆ, ಅದರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಎಂದರು.
ಗ್ರಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಟಿಐ ಆಡಳಿತ ಮಂಡಳಿ ಕಾರ್ಯದರ್ಶಿ ನವೀನ್ ಲೋಬೊ, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಾಹಲಿಂಗ ರಾಯ್, ಮಾರುತಿ ಇದ್ದರು.
ಎಸ್‌ಐ ಪವನ್ ನಾಯಕ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ದಿನೇಶ್ ಕೆ ಬೈಂದೂರು ಸ್ವಾಗತಿಸಿದರು, ರಾಘವೇಂದ್ರ ಆಚಾರ್ ಕಟ್‌ಬೇಲ್ತೂರ್ ವಂದಿಸಿದರು, ಕಿಶೋರ್ ಸಸಿಹಿತ್ಲು ಬೈಂದೂರು ನಿರೂಪಿಸಿದರು.

