ಕೃಷಿಕರ ಜೀವಾಳವಾಗಿರುವ ಹೊಸ್ತ್(ಕದಿರು) ಹಬ್ಬವು ಬೈಂದೂರ ಹಲವೆಡೆ ಮನೆಮನೆಗಳಲ್ಲಿ ಸಂಭ್ರಮದಿಂದ ಜರುಗಿತು
ಕರಾವಳಿಯ ಭತ್ತದ ಬೇಸಾಯವೇ ದೇವತಾ ಕಾರ್ಯ. ಈ ನೆಲೆಯಲ್ಲಿ ಬಹಳಷ್ಟು ಮಹತ್ವ ಹೊಂದಿರುವ ಕಾರ್ತಿಕ ಬೆಳೆಯನ್ನು ಮನೆ ತುಂಬಿಸುವ ಸಮಯಕ್ಕೆ ಭತ್ತದ ತೆನೆಯು ಹಾಲಿನಿಂದ ತುಂಬಿ ತುಳುಕುತ್ತಿರುತ್ತದೆ.
ಮಳೆಗಾಲದ ಆರ್ಭಟ ಕಡಿಮೆಯಾಗಿರುತ್ತದೆ ಇಂತಹ ಸಮಯದಲ್ಲಿ ಕೃಷಿಕರು ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ, ಜಾಗಟೆ ಸದ್ದಿನೊಂದಿಗೆ ಗದ್ದೆಗೆ ತೆರಳಿ ತೆನೆಗೆ ಪೂಜೆ ಪುನಸ್ಕಾರಗಳನ್ನು ಪೂರೈಸಿ, ನಂತರ ಕದರನ್ನು ಹೊತ್ತು ತಂದು ಮನೆಯ ಕೋಣೆಯಲ್ಲಿ ಮಣೆಯ ಮೇಲಿಟ್ಟು ಅತ್ಯಂತ ಶೃದ್ಧಾ ಭಕ್ತಿಯಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.

ನಂತರ ಮನೆಯ ಎಲ್ಲಾ ಕೃಷಿ ಪರಿಕರಗಳಿಗೆ ಮನೆಯ ವಿವಿಧ ಭಾಗಗಳಿಗೆ, ವಾಹನಗಳಿಗೆ ಕದಿರನ್ನು ಕಟ್ಟುತ್ತಾರೆ.ನಂತರ ಕುಟುಂಬದವರೆಲ್ಲ ಸೇರಿ ಪರಸ್ಪರ ಪ್ರೀತಿ ಹಂಚಿಕೊಂಡು ಗುರು ಹಿರಿಯರ ಆಶೀರ್ವಾದ ಪಡೆದು ಹೊಸಕ್ಕಿಯ ಊಟವನ್ನು ಸವಿದು ಕದಿರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ



