ಬೈಂದೂರು/ಬಿಜೂರು: ಬಿಜೂರು ರೈಲ್ವೆ ನಿಲ್ದಾಣದ ನಿರಂತರ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹಿಸಿ ಬಿಜೂರು ರೈಲ್ವೆ ಯಾತ್ರಿಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರಮುಖ ಬೇಡಿಕೆಗಳು:
- ಗರೀಬ್ ರಥ್ / ಮಂಗಳ ಎಕ್ಸ್‌ಪ್ರೆಸ್ ನಿಲುಗಡೆ ಇಲ್ಲವಾದಲ್ಲಿ ‘ರೈಲ್ ರೋಕೋ’ ಎಚ್ಚರಿಕೆ:
ಈ ಹಿಂದೆ ಬಿಜೂರು ನಿಲ್ದಾಣದಲ್ಲಿ ನಿಲ್ಲುತ್ತಿದ್ದ ‘ಗರೀಬ್ ರಥ್ ಎಕ್ಸ್‌ಪ್ರೆಸ್’ ರೈಲನ್ನು ಪ್ರಸ್ತುತ ಬೈಂದೂರಿಗೆ ಸ್ಥಳಾಂತರಿಸಲಾಗಿದ್ದು, ಅದನ್ನು ತಕ್ಷಣವೇ ಪುನಃ ಬಿಜೂರಿನಲ್ಲಿ ನಿಲ್ಲಿಸಬೇಕು. ಒಂದು ವೇಳೆ ಗರೀಬ್ ರಥ್ ನಿಲುಗಡೆ ಸಾಧ್ಯವಾಗದಿದ್ದರೆ, ಪರ್ಯಾಯವಾಗಿ ‘ಮಂಗಳ ಎಕ್ಸ್‌ಪ್ರೆಸ್’ ರೈಲನ್ನಾದರೂ ಬಿಜೂರಿನಲ್ಲಿ ನಿಲ್ಲಿಸಬೇಕು. ಇವೆರಡರಲ್ಲಿ ಒಂದನ್ನಾದರೂ ಬಿಜೂರಿನಲ್ಲಿ ನಿಲ್ಲಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ‘ರೈಲ್ ರೋಕೋ’ (ರೈಲು ತಡೆ) ಚಳವಳಿ ನಡೆಸುವುದಾಗಿ ಸಾರ್ವಜನಿಕರು ಗಂಭೀರ ಎಚ್ಚರಿಕೆ ನೀಡಿದ್ದಾರೆ. - ಇನ್ನಿತರ ಪ್ರಮುಖ ರೈಲುಗಳ ನಿಲುಗಡೆಗೆ ಮನವಿ:
ಮುಂಬೈ ಸಿಎಸ್‌ಟಿ, ಮತ್ಸ್ಯಗಂಧ, ಬೆಂಗಳೂರಿಗೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ಹಾಗೂ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲುಗಳನ್ನು ಬಿಜೂರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿಲ್ಲಿಸಬೇಕೆಂದು ಕೋರಲಾಗಿದೆ. - ‘ಮೂಕಾಂಬಿಕಾ ರೈಲ್ವೇ ನಿಲ್ದಾಣ ಬಿಜೂರು’ ಎಂದು ಮರುನಾಮಕರಣ:
ಪ್ರಸಿದ್ಧ ಕೊಲ್ಲೂರು ಕ್ಷೇತ್ರಕ್ಕೆ ಬಿಜೂರು ನಿಲ್ದಾಣವೇ ತೀರಾ ಹತ್ತಿರವಾಗಿರುವುದರಿಂದ, ಈ ನಿಲ್ದಾಣಕ್ಕೆ “ಮೂಕಾಂಬಿಕಾ ರೈಲ್ವೆ ನಿಲ್ದಾಣ ಬಿಜೂರು” ಎಂದು ಮರುನಾಮಕರಣ ಮಾಡಬೇಕೆಂದು ಸರ್ಕಾರ ಹಾಗೂ ರೈಲ್ವೆ ಇಲಾಖೆಯನ್ನು ಒತ್ತಾಯಿಸಲಾಗಿದೆ.
ಮೂಲಸೌಕರ್ಯವಿದ್ದರೂ ಬಿಜೂರು ನಿಲ್ದಾಣಕ್ಕೆ ತಾರತಮ್ಯ:
ಬಿಜೂರು ರೈಲ್ವೆ ನಿಲ್ದಾಣವು 48.6 ಎಕರೆ ವಿಸ್ತಾರವಾದ ಜಾಗವನ್ನು ಹೊಂದಿದ್ದು, ಉತ್ತಮ ಸಾಮರ್ಥ್ಯ ಹೊಂದಿದೆ. ಆದಾಗ್ಯೂ, ಕೇವಲ 14.6 ಎಕರೆ ಜಾಗ ಹೊಂದಿರುವ ಬೈಂದೂರು ಮೂಕಾಂಬಿಕಾ ರೈಲು ನಿಲ್ದಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ವಿಶಾಲವಾದ ಜಾಗವಿದ್ದರೂ ಬಿಜೂರು ನಿಲ್ದಾಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಸ್ಥಳೀಯರ ಹಾಗೂ ಯಾತ್ರಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜಾಗ ಮರಳಿಸುವಂತೆ ಶಾಸಕರ ಎಚ್ಚರಿಕೆ:
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ರೈಲ್ವೆ ಇಲಾಖೆಯು ಸಾರ್ವಜನಿಕರ ಹೋರಾಟಕ್ಕೆ ಗೌರವ ನೀಡಿ ನಾವು ಕೋರಿದ ರೈಲುಗಳಲ್ಲಿ ಕನಿಷ್ಠ ಒಂದನ್ನಾದರೂ ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಈ ರೈಲ್ವೆ ನಿಲ್ದಾಣವನ್ನು ಡೆಮಾಲಿಷ್ ಮಾಡಿ (ನೆಲಸಮಗೊಳಿಸಿ), ಈ ಹಿಂದೆ ರೈಲ್ವೆ ಯೋಜನೆಗೆ ಜಾಗ ನೀಡಿದ ಭೂಮಾಲೀಕರಿಗೆ ಅವರ ಜಾಗವನ್ನು ಸಂಪೂರ್ಣವಾಗಿ ಮರಳಿಸಬೇಕು ಎಂದು ಆಗ್ರಹಿಸಿದರು.




