ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಎಬೋಲಾ ವೈರಸ್ ಅತಿ ವೇಗವಾಗಿ ಹರಡುತ್ತಿದ್ದು ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮುನ್ನೆಚ್ಚರಿ ಕಾರ್ಯಕ್ರಮವಾಗಿ ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ, ಪರಿಸ್ಥಿತಿಯನ್ನು ಎದುರಿಸಲು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದು ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯ ಕುಮಾರಿ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್ ದೇಶಗಳಲ್ಲಿ ಎಬೋಲಾ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ನೀಡಿರುವ ಮಾರ್ಗಸೂಚಿಗಳ ಅನ್ವಯ ತಕ್ಷಣದ ಕ್ರಮಗಳಿಗೆ ಮುಂದಾಗಿದೆ.
ಎಬೋಲಾ ಲಕ್ಷಣಗಳು :
ಆರಂಭದಲ್ಲಿ ಹಠಾತ್ ಜ್ವರ, ತೀವ್ರ ದಣಿವಿಗೆ ಒಳಗಾಗುವುದು, ಸ್ನಾಯು ನೋವು, ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ರೋಗ ಉಲ್ಬಣಗೊಂಡಂತೆ ವಾಂತಿ, ಭೇದಿ, ಚರ್ಮದ ಮೇಲೆ ದದ್ದುಗಳು, ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ ಉಂಟಾಗುತ್ತದೆ. ಅತ್ಯಂತ ಭೀಕರ ಹಂತದಲ್ಲಿ ದೇಹದ ಒಳಗಿನ ಅಂಗಾಂಗಗಳು ಮತ್ತು ಹೊರಗಿನ ಮೂಗು ಹಾಗೂ ಒಸಡುಗಳಿಂದ ತೀವ್ರ ರಕ್ತಸ್ರಾವವಾಗುತ್ತದೆ.
ಎಬೋಲಾ ಗಾಳಿಯ ಮೂಲಕ ಹರಡುವುದಿಲ್ಲ, ಬದಲಿಗೆ ಸೋಂಕಿತ ಪ್ರಾಣಿಗಳ ಅಥವಾ ಮನುಷ್ಯರ ರಕ್ತ, ಲಾಲಾರಸ, ಬೆವರು, ಮೂತ್ರ ಅಥವಾ ಇತರ ದೈಹಿಕ ದ್ರವಗಳ ನೇರ ಸಂಪರ್ಕಕ್ಕೆ ಬರುವುದರಿಂದ ಹರಡುತ್ತದೆ. ಸೋಂಕಿತ ವ್ಯಕ್ತಿ ಬಳಸಿದ ಬಟ್ಟೆ, ಹಾಸಿಗೆ ಅಥವಾ ಸೂಜಿಗಳನ್ನು ಬಳಸುವುದರಿಂದಲೂ ಇದು ಮತ್ತೊಬ್ಬರಿಗೆ ಹರಡಬಹುದು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆ ಮಾಡುವ ಕುಟುಂಬದ ಸದಸ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗಲುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ.

