ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆಯಲು ಜಿಲ್ಲೆಯಾದ್ಯಂತ ಸಿಸಿಟಿವಿ ಅಳವಡಿಕೆ ಮುಂದಾದ ಪೋಲಿಸ್ ಇಲಾಖೆ

ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಲು ಈಗಾಗಲೇ ಕೆಮರಾ ಕಣ್ಗಾವಲು ಇರಿಸಿರುವ ಪೊಲೀಸ್ ಇಲಾಖೆ, ಸುಮಾರು 210 ಪ್ರದೇಶಗಳಲ್ಲಿ 650 ಸಿಸಿಟಿವಿ ಅಳವಡಿಕೆಗೆ ನಿರ್ಧರಿಸಿದೆ.

ಜಿಲ್ಲಾದ್ಯಂತ ಪೊಲೀಸ್ ಕಂಟ್ರೋಲ್ ರೂಂ ಮೂಲಕ ನಗರದ ಆಗು ಹೋಗುಗಳ ಮೇಲೆ ಕಣ್ಣಿರಿಸುವುದು ಪೊಲೀಸ್‌ ಇಲಾಖೆಯ ಲೆಕ್ಕಾಚಾರ.

ಪೊಲೀಸ್‌ ಇಲಾಖೆಯು ಜಿಲ್ಲೆಯ ವಿವಿಧೆಡೆ ಈಗಾಗಲೇ ಚೇಂಬರ್‌ಆಫ್ ಕಾಮರ್ಸ್ ಹಾಗೂ ದಾನಿಗಳ ಸಹಾಯದಿಂದ ಸುಮಾರು 60 ಪ್ರದೇಶಗಳಲ್ಲಿ 220 ಸಿಸಿಟಿವಿ ಅಳವಡಿಸಿ ನಿಗಾ ವಹಿಸಿದೆ. ಈಗ ಹೆಚ್ಚುವರಿಯಾಗಿ 210 ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ.

ಕೇಂದ್ರ ಸರಕಾರ 5 ಕೋಟಿ ರೂ. ಅನುದಾನ ನೀಡುತ್ತಿದ್ದು, 126 ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಕೆಗೆ ಟೆಂಡರ್‌ಕರೆಯಲು ನಿರ್ಧರಿಸಲಾಗಿದೆ. ರಾತ್ರಿ ಸಹ ಸ್ಪಷ್ಟವಾಗಿ ಕಾಣುವ ಮತ್ತಷ್ಟು ಹೈ ಡೆಫಿನಿಷನ್ ಕೆಮರಾ ಅಳವಡಿಸಲಾಗುತ್ತಿದೆ. ಜತೆಗೆ ರಾಜ್ಯ ಸರಕಾರದ ಅನುದಾನದಲ್ಲಿ 6 ಸ್ಪೀಡ್ ರಾಡಾರ್ ಕೆಮರಾಗಳನ್ನು 6 ಕಡೆ ಅಳವಡಿಸಲಾಗುತ್ತಿದೆ. ಅದಲ್ಲದೇ ಇನ್ನೂ 14 ಪ್ರದೇಶಗಳಿಗೆ ಇದೇ ಕೆಮರಾಗಳನ್ನು ಅಳವಡಿಸಲು ಯೋಜಿಸಲಾಗುತ್ತಿದೆ. ಅಲ್ಲದೇ ನಗರಸಭೆಯ ಯೋಜನೆಯಡಿ 30 ಪ್ರದೇಶಗಳಲ್ಲಿ 60 ಕೆಮರಾಗಳು ಅಳವಡಿಕೆಯಾಗಲಿದೆ. ಈ ಮೂಲಕ ಜಿಲ್ಲೆಯ ಎಲ್ಲ ಪ್ರಮುಖ ಸ್ಥಳಗಳೂ ಪೊಲೀಸರ ಕಣ್ಣಾವಲಿನಲ್ಲಿ ಇರಲಿವೆ.

ಸದ್ಯ ಸ್ಪೀಡ್ ರೇಡಾರ್‌ಕೆಮರಾದ ಕಂಟ್ರೋಲ್ ರೂಂ ಮಾತ್ರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿದೆ. ಆದರೆ, ವಿವಿಧೆಡೆ ಅಳವಡಿಸಿರುವ ಸಿಸಿ ಕೆಮರಾಗಳ ಕೇಂದ್ರೀಕೃತ ಪರಿಶೀಲನೆ ವ್ಯವಸ್ಥೆ ಇನ್ನೂ ಜಾರಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳೊಳಗೆ ಎಲ್ಲ 650 ಸಿಸಿ ಕೆಮರಾಗಳ ದೃಶ್ಯಾವಳಿಗಳ ಪರಿಶೀಲನೆ ಹಾಗೂ ನಿಯಂತ್ರಣ ವ್ಯವಸ್ಥೆಯ ಕಂಟ್ರೋಲ್ ರೂಂ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗುತ್ತದೆ.

ಜಿಲ್ಲಾದ್ಯಂತ ಸುಮಾರು 207-210 ಪ್ರದೇಶಗಳಲ್ಲಿ ಸಿಸಿ ಕೆಮರಾ ಅಳವಡಿಕೆಯ ಗುರುತಿಸಲಾಗಿದ್ದು, ಇಲ್ಲಿ ಎರಡರಿಂದ ಮೂರು ಕೆಮರಾಗಳನ್ನು ಅಳವಡಿಸಲಾಗುತ್ತಿದೆ, ಉಡುಪಿ ಜಿಲ್ಲೆ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading