ಡಿಸೆಂಬರ್ 10ರಂದು ಇತಿಹಾಸ ಪ್ರಸಿದ್ಧ ತಗ್ಗರ್ಸೆ ಸಾಂಪ್ರದಾಯಕ ಕಂಬಳೋತ್ಸವ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬೈಂದೂರು ತಾಲೂಕು ಭಾಗದ ಪ್ರಸಿದ್ಧ ಕಂಬಳ ಹಾಗೂ ಕಂಬಳಗದ್ದೆಗಳ ಪೈಕಿ ಪ್ರಮುಖವಾದದ್ದು ತಗ್ಗರ್ಸೆ ಸಾಂಪ್ರದಾಯಿಕ ಕಂಬಳ ಇಲ್ಲಿ ಪ್ರತಿ ವರ್ಷವೂ ಬಹಳ ವಿಜೃಂಭಣೆಯಿಂದ ಕಂಬಳ ಆಚರಿಸಿಕೊಂಡು ಬಂದಿರುತ್ತಾರೆ.ತಗ್ಗರ್ಸೆ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷ ದೇವರ ಕಾರ್ಯಗಳಿಗೆ ವಿಶೇಷ ಮಹತ್ವ ನೀಡಿ ಸಾಂಸ್ಕೃತಿಕವಾಗಿ ವಿಜೃಂಭಣೆಯಿಂದ ನಡೆಯುತ್ತದೆ.

ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಳೆಯ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು ಎಂಬ ಸಂಪ್ರದಾಯ ಇರುವುದರಿಂದ ಹತ್ತಾರು ಜೊತೆ ಎತ್ತುಗಳು (ಪ್ರಸ್ತುತ ಟಿಲ್ಲರ್ ಬಳಸಲಾಗುತ್ತಿದೆ), ನೂರಾರು ಕೃಷಿ ಆಳುಗಳು ಒಂದೇ ದಿನದಲ್ಲಿ ಗದ್ದೆ ನಾಟಿ ಮಾಡಿ ಮುಗಿಸುತ್ತಾರೆ. ಈ ಕಾರ್ಯ ಶುದ್ದಾಚಾರದಲ್ಲಿ ನಡೆಯುವುದರಿಂದ ಸೂತಕವಿದ್ದವರು, ಗರ್ಭೀಣಿಯರು ಗದ್ದೆಗೆ ಇಳಿಯುವಂತಿಲ್ಲ. ಕಟಾವು ಕಾರ್ಯವು ಅಷ್ಟೇ. ಒಂದೇ ದಿನದಲ್ಲಿ ಮುಗಿಯಬೇಕು. ನಾಟಿ ಹಾಗೂ ಕಟಾವು ಕಾರ್ಯದಲ್ಲಿ ಊರಿನ ಇತರ ಕೃಷಿಕರು ಭಾಗವಹಿಸಿ ಸಾರ್ಥಕ ಭಾವ ಹೊಂದುತ್ತಾರೆ.


ಈ ಬಾರಿ ಡಿಸೆಂಬರ್ 10 ರಂದು ಸಾಂಪ್ರದಾಯಿಕ ಕಂಬಳ ನಡೆಯುತ್ತಿದ್ದು. ಕಂಬಳಕ್ಕೆ ದಿನ ನಿಗದಿಯಾದಾಗಿನಿಂದ ಕಂಬಳದ ಕೋಣಗಳ ಓಟದ ತಾಲೀಮು ಆರಂಭಗೊಳ್ಳುತ್ತದೆ. ಕಂಬಳದ ಹಿಂದಿನ ದಿನವೇ ಗದ್ದೆಯ ದ್ವಾರವನ್ನು ತೋರಣಗಳಿಂದ ಅಲಂಕರಿಸಲಾಗುತ್ತದೆ. ನಿಯಮಬದ್ಧವಾಗಿ ಖುರ್ಜು(ಪೂಕರೆ ಕಂಬ) ನಿಲ್ಲಿಸಿದ ಬಳಿಕ ಯಾವುದೇ ಕೊಣಗಳನ್ನು ಗದ್ದೆಗೆ ಇಳಿಸುವಂತಿಲ್ಲ. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಡೊಲು ಬಾರಿಸುವುದು, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯುತ್ತದೆ.ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ನೂರಾರು ಜೊತೆ ಕೋಣಗಳು ವರ್ಷಂಪ್ರತಿ ಆಗಮಿಸುತ್ತವೆ. ಕಂಬಳ ಗದ್ದೆಯಲ್ಲಿ ಕೆಲವರು ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ಊರಿನ ಎಲ್ಲಾ ನಾಗರಿಕರು ಬಹಳ ಸಕ್ರೀಯವಾಗಿ ಪಾಲ್ಗೊಂಡು ಕಂಬಳವನ್ನು ಸಂಭ್ರಮಿಸುತ್ತಾರೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading